ಶ್ರೀ ಭಾರತೀ ವಿದ್ಯಾಲಯ ಬೆಂಗಳೂರಿನಲ್ಲಿ ಶಾಲೆಯ ಸಂಸ್ಥಾಪಕರೂ ದಿಗ್ದರ್ಶಕರೂ ಆದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಸ್ವಾಗತ ಧೂಳೀಪೂಜೆ ಭಿಕ್ಷಾಸೇವೆ ಮತ್ತು ಪಾದಪೂಜೆ ಸೇವೆಗಳನ್ನು ನೆರವೇರಿಸಲಾಯಿತು. ತದಂಗವಾಗಿ ಗೋಪೂಜೆಯೂ ನಡೆಯಿತು. ಮಾತೆಯರಿಂದ ಕುಂಕುಮಾರ್ಚನೆ ಸೇವೆಗಳು ನಡೆದವು.
ಗುರುಭಿಕ್ಷಾ ಸೇವೆಯನ್ನು ಸ್ವೀಕರಿಸಿದ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ” ಮಠದ ಶಾಲೆಗಳ ಉದ್ದೇಶ ಹಣವಲ್ಲ, ಸಂಸ್ಕಾರ. ಇಲ್ಲಿ ವಿದ್ಯೆ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಸ್ಕಾರವಂತನಾಗಿ ಬೆಳೆಯಬೇಕು. ಶ್ರೀ ಭಾರತೀ ವಿದ್ಯಾಲಯವೆಂದರೆ ಶ್ರೀ ರಾಮಚಂದ್ರಾಪುರಮಠದ ಒಂದು ಚಿಗುರು, ಇಂದು ಚಿಗುರಿನೆಡೆ ಬೇರು ಬಂದಿದೆ. ಒಂದು ಹಿಡಿ ಮಂತ್ರಾಕ್ಷತೆಯ ಫಲವಾಗಿ ಇಂದು ಇಷ್ಟು ಎತ್ತರದ ಶಾಲೆ ತಲೆಯೆತ್ತಿ ನಿಂತಿದೆ” ಎಂದರು.
ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆಲ್ಲ ಮಾರ್ಗದರ್ಶನ ನೀಡಿದ ಶ್ರೀಗಳು ನಮ್ಮ ಶಾಲೆಯಲ್ಲಿ ನಗುವು ಶಿಕ್ಷಕರು ಮತ್ತು ಮಕ್ಕಳಿಗೆ ಕಡ್ಡಾಯವಾಗಿರಬೇಕು ಎಂದರು.
ನೆರೆದ ಸಮಸ್ತ ಪಾಲಕರು , ಶಿಕ್ಷಕರು, ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಫಲ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
ಸಾವಿರಾರು ಜನರಿಗೆ ಪ್ರಸಾದ ಭೋಜನವನ್ನು ವಿತರಿಸಲಾಯಿತು.
ರಾತ್ರಿ ೮.೧೦ಕ್ಕೆ ಶ್ರೀಗಳಿಂದ ಸಾಧನಾ ಪಂಚಕ ಪ್ರವಚನ ಮಾಲಿಕೆ ಸಂಪನ್ನವಾಯಿತು.
ಶ್ರೀಕರಾರ್ಚಿತ ಸಪರಿವಾರ ಶ್ರೀ ರಾಮದೇವರ ಪೂಜೆ, ಗುರು ಪಾದಸ್ಪರ್ಶಗಳು ಶಾಲೆಯ ದಿವ್ಯತೆಯನ್ನು ಇನ್ನಷ್ಟು ಹೆಚ್ಚಿಸಿದವು.